ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ನಡೆದ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸಿಎಂ ಸಿದ್ದರಾಮಯ್ಯನವರು ತೆರೆದ ಜೀಪಿನಲ್ಲಿ ಗೌರವ ವಂದನೆ ಸ್ವೀಕರಿಸಿದರು.. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಾಣಿಕ್ ಷಾ ಪರೇಡ್‌ನ ಮೈದಾನದಲ್ಲಿ ಹಮ್ಮಿಕೊಂಡಿರುವ ಸ್ವಾತಂತ್ರ್ಯೋತ್ಸವಕ್ಕೆ ಗಾಂಧಿ ಟೋಪಿ ಧರಿಸಿ ಮಿಂಚಿದ್ದಾರೆ.
ಇತಿಹಾಸ ಮೆಲುಕು ಹಾಕಿದ ಸಿಎಂ
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿತ್ತು. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ದೋಂಡಿಯಾ ವಾಘ, ಹಲಗಲಿಯ ವೀರ ಬೇಡರು, ಮೈಲಾರ ಮಹಾದೇವಪ್ಪ, ಬೂದಿ ಬಸಪ್ಪ ನಾಯಕ ಮುಂತಾದವರು ಹಾಗೂ ಶ್ರೀರಂಗಪಟ್ಟಣ, ಸುರಪುರ, ಕಿತ್ತೂರು, ಈಸೂರು, ವಿಧುರಾಶ್ವತ್ಥ, ಶಿವಪುರ, ಅಂಕೋಲ ಮುಂತಾದ ಸ್ಥಳಗಳು ಬ್ರಿಟೀಷರನ್ನು ನಡುಗಿಸಿದ್ದವು. ಲಕ್ಷಾಂತರ ಜನರು ಸಕ್ರಿಯವಾಗಿ ಭಾಗವಹಿಸಿದ್ದರಲ್ಲದೆ ಸಾವಿರಾರು ಜನರು ಜೀವ ತ್ಯಾಗ ಮಾಡಿದ್ದಾರೆ. ಅವರೆಲ್ಲರನ್ನೂ ಕೃತಜ್ಞತಾ ಪೂರ್ವಕವಾಗಿ ಗೌರವಿಸೋಣ.
ಸ್ವಾತಂತ್ರ್ಯಾ ನಂತರ ದೇಶದ ರಕ್ಷಣೆಗಾಗಿ ನಡೆದ ಯುದ್ಧಗಳಲ್ಲಿ, ಸಂಘರ್ಷಗಳಲ್ಲಿ ಅಸಂಖ್ಯಾತ ಸೈನಿಕರು ಹುತಾತ್ಮರಾಗಿದ್ದಾರೆ. ಪ್ರಧಾನ ಮಂತ್ರಿಗಳಾಗಿದ್ದವರು ಸಹ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ದೇಶದ ಆರ್ಥಿಕತೆಯನ್ನು ಕಟ್ಟಿ ಬೆಳೆಸುವ ಕೈಂಕರ್ಯದಲ್ಲಿ ಅಸಂಖ್ಯಾತ ಕಾರ್ಮಿಕರು, ರೈತರು, ವಿದ್ವಾಂಸರು, ವಿಜ್ಞಾನಿಗಳು, ಶಿಕ್ಷಕರು, ಹೋರಾಟಗಾರರೂ ಸೇರಿದಂತೆ ಸಮಸ್ತ ಉತ್ಪಾದಕ ವರ್ಗಗಳ ಜನರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಅವರೆಲ್ಲರನ್ನು ಈ ಸುಸಂದರ್ಭದಲ್ಲಿ ಸ್ಮರಿಸಲೇಬೇಕಾಗಿದೆ ಎಂದರು.
ಇತ್ತೀಚೆಗೆ ತಾನೆ ಪಹಲ್ಗಾಮ್‍ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮಡಿದವರು ಹಾಗೂ ಆ ನಂತರದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಎಲ್ಲರನ್ನೂ ಋಣಪೂರ್ವಕವಾಗಿ ದೇಶವು ನೆನಪಿಡುತ್ತದೆ. ಅವರೆಲ್ಲರ ಧೀರೋದಾತ್ತ ಹೋರಾಟವನ್ನು ವಿನೀತ ಭಾವದಿಂದ ತಲೆಬಾಗಿ ಗೌರವಿಸುತ್ತದೆ.
ನಮ್ಮ ಹೆಮ್ಮೆಯ ನವಭಾರತದ ನಿರ್ಮಾಣದಲ್ಲಿ ತ್ಯಾಗ ಬಲಿದಾನಗಳನ್ನು ಮಾಡಿದ ಮಹಾನ್ ವ್ಯಕ್ತಿಗಳ ಮಾತುಗಳನ್ನು ನೆನಪಿಸಿಕೊಳ್ಳುವುದು ಈ ಸಂದರ್ಭದಲ್ಲಿ ಔಚಿತ್ಯಪೂರ್ಣ ಎನ್ನಿಸಿದೆ. ಪಂಡಿತ್ ಜವಾಹರ್ಲಾಲ್ ನೆಹರೂ ಅವರ ಪ್ರಕಾರ ದೇಶ ಸೇವೆ ಎಂದರೆ ಸಂಕಷ್ಟದಲ್ಲಿರುವ ಕೋಟ್ಯಾಂತರ ಜನರ ಸೇವೆ. ಬಡತನ, ಅಜ್ಞಾನ, ರೋಗ ರುಜಿನಗಳಲ್ಲಿ ನರಳುವವರ ಬದುಕನ್ನು ನೇರ್ಪು ಮಾಡುವುದು ಎಂದಿದ್ದಾರೆ.
ರಾಜ್ಯದ ಅಭಿವೃದ್ಧಿಯ ದಿಕ್ಕನ್ನೇ ಬದಲಿಸಿದ ಗ್ಯಾರಂಟಿ
ನುಡಿದಂತೆ ನಡೆಯಬೇಕು ಎಂಬುದು 12ನೇ ಶತಮಾನದ ಬಸವಾದಿ ಶರಣರ ನಿಶ್ಚಲ ನಿಲುವು. ನಮ್ಮ ಸರ್ಕಾರ ಈ ಧ್ಯೇಯ ವಾಕ್ಯದಲ್ಲಿ ನಂಬಿಕೆಯಿಟ್ಟು ರಾಜ್ಯವು ತನ್ನದೇ ಆದ ಅಭಿವೃದ್ಧಿ ಮಾದರಿಗಳನ್ನು ನಿರ್ಮಿಸಿದೆ. ಇದಕ್ಕೆ ಕರ್ನಾಟಕ ಅಭಿವೃದ್ಧಿ ಮಾದರಿ ಎಂಬ ಹೆಸರಿನಲ್ಲಿ ಮನ್ನಣೆ ದೊರೆತಿರುವುದು ಹೆಮ್ಮೆಯ ಸಂಗತಿ. ವಿಶ್ವಸಂಸ್ಥೆಯ ಮುಖ್ಯಸ್ಥರಾದ ಫಿಲೆಮಾನ್ ಯಾಂಗ್ರವರು ಕರ್ನಾಟಕಕ್ಕೆ ಬಂದು ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಈ ಮೂಲಕ ನಮ್ಮ ಯೋಜನೆಗಳು ವಿಶ್ವಮಾನ್ಯಗೊಂಡಿವೆ.
Read Also : ಕೆಂಪುಕೋಟೆ ಮೇಲೆ ತಿರಂಗಾ : ಪ್ರಧಾನಿ ಮೋದಿ ಮೇಕ್ ಇನ್ ಇಂಡಿಯಾ ಸಂಕಲ್ಪ..!

