ಚಲಿಸುತ್ತಿದ್ದ ಬೈಕಿಗೆ ಟ್ರಾಫಿಕ್ ಪೊಲೀಸರು ಅಡ್ಡ ಬಂದ ಕಾರಣ ಬೈಕ್‌ನಿಂದ ಕೆಳಗೆ ಬಿದ್ದು 3 ವರ್ಷದ ಕಂದ ಬಲಿಯಾಗಿರುವ ಘಟನೆ ಮಂಡ್ಯದ ಸ್ವರ್ಣಸಂದ್ರದ ಬಳಿ ನಡೆದಿದೆ. ಜಿಲ್ಲೆಯ ಮದ್ದೂರು ತಾಲೂಕಿನ ಗೊರವನಹಳ್ಳಿ ನಿವಾಸಿಗಳಾದ ಅಶೋಕ್, ವಾಣಿ ದಂಪತಿಯ ಪುತ್ರಿ ರಿತೀಕ್ಷ ಸ್ಥಳದಲ್ಲೇ ಮೃತಪಟ್ಟಿದೆ. ಮಂಡ್ಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗೊರವನಹಳ್ಳಿ ಗ್ರಾಮದ ರಿತೀಕ್ಷ ಮೃತ ಮಗು. ಗ್ರಾಮದಿಂದ ಇಂದು ಮಂಡ್ಯಕ್ಕೆ ಪೋಷಕರ ಜೊತೆ ಬೈಕ್ನಲ್ಲಿ ಬರ್ತಿತ್ತು. ಈ ವೇಳೆ ಸ್ವರ್ಣಸಂದ್ರ ಬಳಿ ಸಂಚಾರಿ ಠಾಣೆ ಪೊಲೀಸರು ಫೈನ್ ಹಾಕಲು ಬೈಕ್ ಅಡ್ಡಗಟ್ಟಿದ್ದಾರೆ. ನಿಯಂತ್ರಣ ತಪ್ಪಿ ಬೈಕ್ನಿಂದ ಮಗು ಕೆಳಗೆ ಬಿದ್ದಿದೆ. ತಲೆಗೆ ತ್ರೀವ್ರ ಪೆಟ್ಟಾದ ಹಿನ್ನೆಲೆ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಮಗುವನ್ನು ಮಡಿಲಿನಲ್ಲಿ ಇಟ್ಟುಕೊಂಡು ರಸ್ತೆಯಲ್ಲೇ ಪೋಷಕರು ಗೋಳಾಡಿದ್ದಾರೆ.
Also Read: Malnad ಭಾಗದಲ್ಲಿ ಭಾರೀ ಮಳೆ : ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ

ಸದ್ಯ ತಂದೆ-ತಾಯಿ ಆಕ್ರಂದನ ಮುಗಿಲು ಮುಟ್ಟಿದ್ದು, ಪೊಲೀಸರ ವರ್ತನೆಗೆ ಕುಟುಂಬಸ್ಥರ ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಂಡ್ಯ ಮಿಮ್ಸ್ ಆಸ್ಪತ್ರೆ ಮುಂದೆ ಮಗುವಿನ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.