ಬೆಂಗಳೂರು, ಫೆ.16: ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದು, ಬಡವರ ಪಾಲಿಗೆ ನೆರಳಾಗಿದೆ. ಅದರಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಸ್ಕೀಂ, ಮಹಿಳೆಯರನ್ನು ಸ್ವಾವಲಂಬಿ ಬದುಕಿಗೆ ಬೆನ್ನೆಲುಬಾಗಿ ನಿಂತಿದೆ. ಹೌದು.. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಯೂ ಒಂದು. ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕವಾಗಿ ಬೆಂಬಲ ನೀಡುವಲ್ಲಿ ಗ್ಯಾರಂಟಿ ಯೋಜನೆಗಳು ಅದರಲ್ಲೂ ಶಕ್ತಿ ಯೋಜನೆ ಅಭೂತಪೂರ್ವ ಯಶಸ್ಸು ಗಳಿಸಿದೆ. ಮಹಾತ್ಮಾ ಗಾಂಧೀಜಿಯವರ ಅಂತ್ಯೋದಯ ಹಾಗೂ ಸರ್ವೋದಯ ತತ್ವದ ಅಡಿಯಲ್ಲಿ ಹಾಗೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ನಾಯಕತ್ವದಲ್ಲಿ ರೂಪುಗೊಂಡ ಶಕ್ತಿ ಯೋಜನೆ ಜನ ಮನ್ನಣೆಗೆ ಪಾತ್ರವಾಗಿದೆ. ಕಾಂಗ್ರೆಸ್ ಸರ್ಕಾರದ ಸಾವಿರ ದಿನದ ಪಯಣದಲ್ಲಿ ಸಾವಿರಾರು ಮಹಿಳೆಯರ ಬಾಳಿಕೆ ಬೆಳಕಾಗಿದೆ.

ಮಹಿಳೆಯರಿಗೆ ಶಕ್ತಿ ತುಂಬಿದ ಶಕ್ತಿ ಯೋಜನೆ ಸ್ಕೀಂ :
ಅಷ್ಟಕ್ಕೂ ಜೂನ್ 11, 2023ರಂದು ಶಕ್ತಿ ಯೋಜನೆಯನ್ನು ಜಾರಿಗೆ ತರಲಾಯಿತು. ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಸಂಚಾರದ ಹಕ್ಕನ್ನು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಯಿತು. ಪಂಚ ಗ್ಯಾರಂಟಿಗಳಲ್ಲಿ ಮೊದಲನೆಯದಾಗಿ ಜಾರಿಗೆ ಬಂದ ಶಕ್ತಿ ಯೋಜನೆಯು ರಾಜ್ಯದ ಮಹಿಳೆಯರ ಜೀವನದಲ್ಲಿ ಮಹತ್ವದ ಬದಲಾವಣೆ ತಂದಿದೆ. ಈ ಯೋಜನೆಯಿಂದ ದಿನನಿತ್ಯ ಕೆಲಸಕ್ಕೆ ಹೋಗುವ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಬಸ್ ವೆಚ್ಚ ಉಳಿತಾಯವಾಗುತ್ತಿದೆ. ಆ ಹಣವನ್ನು ಇತರ ಕಾರ್ಯಗಳಿಗೆ ಸದುಪಯೋಗ ಪಡಿಸಿಕೊಳ್ಳಲು ನೆರವಾಗುತ್ತಿದೆ. ಸಾರಿಗೆ ವೆಚ್ಚ ಉಚಿತವಾದ ಕಾರಣ ಮಹಿಳೆಯರು ದೂರದ ಊರುಗಳಿಗೆ ಹೋಗಿ ಕೆಲಸ ಮಾಡಲು ಧೈರ್ಯ ತೋರುತ್ತಿದ್ದಾರೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ಬೆಂಗಳೂರಿನಲ್ಲಿ ಮಹಿಳೆಯರ ಉದ್ಯೋಗ ದರ 23% ಹೆಚ್ಚಾಗಿದೆ. ಪರೋಕ್ಷವಾಗಿ ಶಕ್ತಿ ಯೋಜನೆಯೂ ಇದಕ್ಕೆ ಕಾರಣವಾಗಿದೆ. ಇನ್ನು, ರಾಜ್ಯದ ಪ್ರಸಿದ್ಧ ದೇವಸ್ಥಾನಗಳಿಗೆ ಮತ್ತು ಪ್ರವಾಸಿ ತಾಣಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ, ಇದು ಸ್ಥಳೀಯ ವ್ಯಾಪಾರಕ್ಕೂ ಉತ್ತೇಜನ ನೀಡಿದೆ.
ಶಕ್ತಿ ಯೋಜನೆಯು ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿ ಮೂರನೇ ವರ್ಷಕ್ಕೆ ಹೆಜ್ಜೆ ಇಡುತ್ತಿದೆ. ಈವರೆಗೆ 668 ಕೋಟಿಗೂ ಅಧಿಕ ಟಿಕೆಟ್ ವಿತರಣೆಗೊಂಡು ಇತಿಹಾಸ ಸೃಷ್ಟಿಸಿದೆ. ಶಕ್ತಿ ಯೋಜನೆಗೆ ಸರ್ಕಾರ ಸುಮಾರು ₹17,313 ಕೋಟಿ ವೆಚ್ಚ ಭರಿಸಿದೆ. ಇದು ಸಾರಿಗೆ ಸಂಸ್ಥೆಗಳ ಆದಾಯ ಹೆಚ್ಚಿಸಿರುವುದಲ್ಲದೇ ದೇಶದಾದ್ಯಂತ ಮಹಿಳಾ ಸಬಲೀಕರಣದ ಸಂದೇಶ ಸಾರಿದೆ. 75 ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ದಿನನಿತ್ಯ ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಮಹಿಳೆಯರು ಇಂದು ಹಣದ ಹಂಗಿಲ್ಲದೇ ಶಕ್ತಿ ಯೋಜನೆ ಬಳಸಿಕೊಂಡು ತಮ್ಮಿಷ್ಟ ಬಂದಲ್ಲಿಗೆ ಸಂಚರಿಸುತ್ತಿದ್ದಾರೆ.
ಇನ್ನು, ಶಕ್ತಿ ಯೋಜನೆಯ ಲಾಭ ಪಡೆಯಲು ಮಹಿಳೆಯರ ಬಳಿ ಕರ್ನಾಟಕ ರಾಜ್ಯದ ಆಧಾರ್ ಕಾರ್ಡ್ ಅಥವಾ ಇತರ ಗುರುತಿನ ಚೀಟಿ ಕಡ್ಡಾಯವಾಗಿತ್ತು. ಆದ್ರೆ ಇನ್ಮುಂದೆ ಸರ್ಕಾರ ನೀಡುವ ಶಕ್ತಿ ಸ್ಮಾರ್ಟ್ ಕಾರ್ಡ್ ಇರುವುದು ಕಡ್ಡಾಯವಾಗಿದೆ. ಹೊರರಾಜ್ಯದವರು ನಕಲಿ ಆಧಾರ್ ಕಾರ್ಡ್ ಬಳಸಿ ಉಚಿತ ಪ್ರಯಾಣ ಮಾಡುತ್ತಿರುವುದನ್ನು ತಡೆಯಲು ಈ ಕಾರ್ಡ್ ಸಹಕಾರಿಯಾಗಲಿದೆ. 2026ರ ಜೂನ್ ವೇಳೆಗೆ ಈ ಸ್ಮಾರ್ಟ್ ಕಾರ್ಡ್‌ಗಳು ಜಾರಿಗೆ ಬರುವ ಸಾಧ್ಯತೆ ಇದೆ. ಒಟ್ಟಿನಲ್ಲಿ, ಶಕ್ತಿ ಯೋಜನೆಯು ಕೇವಲ ಉಚಿತ ಭಾಗ್ಯವಾಗಿ ಉಳಿಯದೆ, ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕೆಲವು ಸಾರಿಗೆ ಸಂಸ್ಥೆಗಳಲ್ಲಿ ಬಸ್‌ಗಳ ಕೊರತೆಯಂತಹ ಸಮಸ್ಯೆಗಳಿದ್ದರೂ, ಯೋಜನೆಯ ಸಾಮಾಜಿಕ ಲಾಭವು ಅದಕ್ಕಿಂತ ಹೆಚ್ಚಾಗಿದೆ. ಇದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವರ್ಚಸ್ಸು ಹೆಚ್ಚಿಸಿದೆ.