Site icon BosstvKannada

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ : ಹೆಚ್.ಡಿ. ಕುಮಾರಸ್ವಾಮಿ

ರಾಜ್ಯ ಸರ್ಕಾರದ ಪ್ರತೀ ಹಂತದಲ್ಲಿಯೂ ಕಮೀಶನ್ ಹಾವಳಿ ಹಾಗೂ ಭ್ರಷ್ಟಾಚಾರ ಮಿತಿಮೀರಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನೇರ ಆರೋಪ ಮಾಡಿದರು.

ಈ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದಕ್ಕೆ ಮುಖ್ಯಮಂತ್ರಿ ಸಲಹೆಗಾರ ಬಿ.ಆರ್. ಪಾಟೀಲ್ ಅವರು ಹೇಳಿರುವ ಮಾತುಗಳೇ ಸಾಕ್ಷಿ. ಅವರು ಹೇಳಿರುವ ಮಾತುಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ವಸತಿ ಇಲಾಖೆಯಲ್ಲಿ ಕಮಿಷನ್ ಹಾವಳಿ ಎಷ್ಟಿದೆ ಎಂಬ ವಿಚಾರವಾಗಿ ಆಡಿಯೋ ವೈರಲ್ ಆಗಿದೆ. ಇದರಿಂದ ನನಗೆ ಯಾವುದೇ ಆಶ್ಚರ್ಯ ಆಗಿಲ್ಲ ಎಂದು ಅವರು ಹೇಳಿದರು.

ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ತೀಕ್ಷ್ಣವಾಗಿ ಉತ್ತರಿಸಿದ ಅವರು; ಓ ಅದಾ..? ನಿಮಗೆ ಅಚ್ಚರಿನಾ? ಅಚ್ಚರಿನಾ? ಅದು ನಿರಂತರವಾಗಿ ನಡೆಯುತ್ತಿದೆ. ಸೈಟ್ ಕೊಡಬೇಕಾದರೆ, ದುಡ್ಡು ಕೊಡಬೇಕಾದರೆ ಕಮಿಷನ್ ನಡೆಯುತ್ತಿದೆ. ಸರ್ಕಾರದ ಎಲ್ಲ ಇಲಾಖೆಗಳಲ್ಲಿಯೂ ಇದು ನಡೆಯುತ್ತಿದೆ ಎಂದು ಕೇಂದ್ರ ಸಚಿವರು ಕಿಡಿಕಾರಿದರು.

ಕೃಷ್ಣ ಬೇರೇಗೌಡ ಏನು ಹೇಳಿದ್ದಾರೆ ಎಂಬುದನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಯಾವ ಯಾವುದಕ್ಕೆ ಎಷ್ಟೆಷ್ಟು ರೇಟ್ ಫಿಕ್ಸ್ ಮಾಡಿದ್ದಾರೆ ಎಂದು ಅವರು ನೇರವಾಗಿ ಹೇಳಿದ್ದಾರೆ. ತಮ್ಮ ಇಲ್ಲಾಖೆಗಳಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದು ಆಯಾ ಇಲಾಖೆಯ ಮಂತ್ರಿಗಳಿಗೆ ಗೊತ್ತಿದೆ. ಕೃಷ್ಣಭೈರೇಗೌಡರ ಇಲಾಖೆಯಲ್ಲಿ ಯಾವ ರೀತಿ ಕೆಲಸ ನಡೆಯುತ್ತಿದೆ ಎಂದು ಅವರೇ ಹೇಳಿದ್ದಾರೆ. ಈ ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ ಎಂದು ಅವರು ಪ್ರಶ್ನಿಸಿದರು.

ಬಿ.ಆರ್.ಪಾಟೀಲ್ ಹೇಳಿರುವುದು ನಿಜ. ವಸತಿ ಇಲಾಖೆಯಲ್ಲಿ ಹಣ ಕೊಟ್ಟರೆ ಮಾತ್ರ ಅನುದಾನ ಬಿಡುಗಡೆ ಆಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದನ್ನು ನಾನಾಗಲಿ, ವಿರೋಧ ಪಕ್ಷವಾಗಲಿ ಹೇಳುತ್ತಿಲ್ಲ. ಸಾಕ್ಷಾತ್ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರು, ಮುಖ್ಯಮಂತ್ರಿಗಳ ಸಲಹೆಗಾರರೇ ಹೇಳಿದ್ದಾರೆ. ಈಗ ಚೆನ್ನಾಗಿ ಹಣ ಲೂಟಿ ಹೊಡೆದರೆ ಮುಂದೆ ಚುನಾವಣೆ ನಡೆಸಬಹುದು ಎಂಬುದು ಇವರ ಉದ್ದೇಶ ಎಂದು ಅವರು ಕಿಡಿಕಾರಿದರು.

Exit mobile version