ವಾಲ್ಮೀಕಿ ನಿಗಮದಲ್ಲಿನ ಬಹುಕೋಟಿ ಹಗರಣ ಪ್ರಕರಣ ಮತ್ತೆ ಸದ್ದು ಮಾಡ್ತಿದೆ. ವಾಲ್ಮೀಕಿ ನಿಗಮ ಹಗರಣದ ಹಣವನ್ನ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಳಸಲಾಗಿದೆ ಅನ್ನೋ ಆರೋಪದ ಮೇಲೆ ಇಂದು ಬಳ್ಳಾರಿಯಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಸಂಸದರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದ್ದು, ಕಾಂಗ್ರೆಸ್ ನಾಯಕರು ಕಕ್ಕಾಬಿಕ್ಕಿಯಾಗಿದ್ದಾರೆ. ಬೆಳ್ಳಗ್ಗೆಯೇ ಶಾಸಕರಿಗೆ ಹಾಗೂ ಸಂಸದರಿಗೆ ಶಾಕ್ ಕೊಟ್ಟ ಇ.ಡಿ, ಸದ್ಯ ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ.
ಈ ದಾಳಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಕಾಂಗ್ರೆಸ್ ಸಂಸದರು, ಶಾಸಕರ ಮನೆಗಳ ಮೇಲೆ ಇಡಿ ದಾಳಿ ವಿಚಾರವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಯಾರೇ ಆಗಲಿ ತಪ್ಪು ಮಾಡಿದ್ದರೆ ಕ್ರಮಕೈಗೊಳ್ಳಲಿ. ಯಾವುದೇ ಕಾರಣಕ್ಕೂ ತಪ್ಪುಗಳನ್ನು ನಾವು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.
ಇಡಿ ಜಪ್ತಿ ಮಾಡಿದ್ದ ಹಣ ಎಲ್ಲಿ ಹೋಯಿತು
ಈ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ್ದು, ಯಾವ ಕಾರಣಕ್ಕೆ ಇಡಿ ದಾಳಿ ಮಾಡಿದೆ ಅನ್ನೋದು ಇಡಿಯವರಿಗೆ ಗೊತ್ತು. ಇಡಿ ಅಧಿಕಾರಿಗಳ ದಾಳಿ ಇದೇನು ಹೊಸದಲ್ಲ. ಚುನಾವಣೆ ಸಮಯದಲ್ಲಿ ಎಲ್ಲಾ ಪಕ್ಷಗಳ ಹಣ ಸೀಜ್ ಮಾಡಿದ್ದರು. ಇಡಿ ಜಪ್ತಿ ಮಾಡಿದ್ದ ಹಣ ಎಲ್ಲಿ ಹೋಯಿತು, ಯಾರಿಗೂ ಗೊತ್ತಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಶಾಸಕರನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲಾಗುತ್ತಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಮೊದಲಿನಿಂದಲೂ ಸಿಟ್ಟಿದೆ. ಇಡಿ ದಾಳಿ ಮೂಲಕ ಟಾರ್ಚರ್ ಕೊಟ್ಟರೆ ಕಾಂಗ್ರೆಸ್ ಇಬ್ಭಾಗ ಮಾಡಬೇಕೆಂಬ ಉದ್ದೇಶ ಇರಬೇಕು. ಆದರೆ ಅದು ಸಾಧ್ಯವಿಲ್ಲದ ಮಾತು ಎಂದು ಹೇಳಿದ್ದಾರೆ.
ಇವೆಲ್ಲಾ ಪೂರ್ವ ನಿಯೋಜಿತ ದಾಳಿಗಳು: ಬಸವರಾಜ ರಾಯರೆಡ್ಡಿ
ದೆಹಲಿಯಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮಾತನಾಡಿದ್ದು, ಕೇಂದ್ರದಲ್ಲಿರುವ ಮೋದಿ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಬರೀ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಇಡಿ, ಐಡಿ ದಾಳಿ ಆಗುತ್ತಿದೆ. ಇವೆಲ್ಲಾ ಪೂರ್ವ ನಿಯೋಜಿತ ದಾಳಿಗಳು, ಇಡಿ ದಾಳಿ ಸರಿಯಲ್ಲ. ಕಾಂಗ್ರೆಸ್ ನಾಯಕರನ್ನು ಕುಗ್ಗಿಸಲು ದಾಳಿಗಳನ್ನು ಮಾಡಲಾಗುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಬಗ್ಗೆ ತನಿಖೆ ಆಗಲಿ, ಆದರೆ ಇಡಿಗೂ ವಾಲ್ಮೀಕಿ ನಿಗಮದ ಕೇಸ್ಗೂ ಏನು ಸಂಬಂಧ ಎಂದಿದ್ದಾರೆ.
